ಅಧಿಕಾರಷಾಹಿ ಆಡಳಿತ

ದಬ್ಬಾಳಿಕೆಯ ಅಧಿಕಾರವನ್ನು (ಬ್ಯೂರಾಕ್ರಸಿ) ನಿರೂಪಿಸಲು ಈ ಪದವನ್ನು ಬಳಸುತ್ತಾರಾದರೂ ಇದರ ಅರ್ಥ ಮಾತ್ರ ಎಲ್ಲ ದೇಶಗಳಲ್ಲೂ ಎಲ್ಲ ಕಾಲದಲ್ಲೂ ಒಂದೇ ಸಮನಾಗಿಲ್ಲ. ಪ್ರಾಚೀನ ಚೀನದಲ್ಲಿದ್ದ ಆಡಳಿತಾಧಿಕಾರಿಗಳನ್ನು ಆರಿಸುವುದಕ್ಕೆ ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನೇರ್ಪಡಿಸುತ್ತಿದ್ದರು; ಇವುಗಳಲ್ಲಿ ಉತ್ತೀರ್ಣರಾದವರನ್ನೇ ಹುದ್ದೆಗಳಿಗೆ ನೇಮಿಸುತ್ತಿದ್ದರು. ಹುದ್ದೆ ದೊರಕಿದ ಮೇಲೆ ಈ ಅಧಿಕಾರಿಗಳು ನಿರಂಕುಶರಾಗಿ ಸ್ವೇಚ್ಛಾಡಳಿತ ನಡೆಸುವುದು ಸಾಮಾನ್ಯವಾಗಿತ್ತು. ರಾಜಪ್ರಭುತ್ವವಿದ್ದ (ಅದರಲ್ಲೂ ನಿರಂಕುಶಪ್ರಭುತ್ವ) ಆ ಕಾಲದಲ್ಲಿ ಅಧಿಕಾರಿಗಳೂ ರಾಜನಂತೆ ನಿರಂಕುಶರಾಗಿದ್ದುದೇನೂ ಆಶ್ಚರ್ಯವಲ್ಲ. ಆಳ್ವಿಕೆ ನಡೆಸುವ ಅಧಿಕಾರಿಗಳ ನೀತಿನಡತೆಗಳನ್ನು ಪ್ರಜೆಗಳು ಪ್ರಶ್ನಿಸುವಂತಿಲ್ಲ. ಬ್ರಿಟಿಷರ ಕಾಲದಲ್ಲೂ ಭಾರತದ ಆಡಳಿತ ಹೀಗೆಯೇ ಇತ್ತೆನ್ನಬಹುದು. ಅವರು ಪರಕೀಯರು; ತಮ್ಮ ಅಧಿಪತ್ಯವನ್ನು ಭದ್ರಪಡಿಸಿಕೊಂಡು ಇಂಗ್ಲೆಂಡಿನ ಹಿತಾರ್ಥಗಳನ್ನು ಸಾಧಿಸುವುದು ಅವರ ಪ್ರಥಮಕರ್ತವ್ಯವಾಗಿತ್ತು. ಅವರ ದೃಷ್ಟಿಯಲ್ಲಿ ಭಾರತೀಯರ ಕ್ಷೇಮ ಚಿಂತನೆಗೆ ಎರಡನೆಯ ಸ್ಥಾನ. ಪ್ರಜಾಕ್ಷೇಮಕ್ಕೆ ಅವಶ್ಯಕವಾದ ಅನೇಕ ಕಾರ್ಯಗಳನ್ನು ಅವರು ಮಾಡಿದರು ಎಂಬುದರಲ್ಲಿ ಸಂಶಯವಿಲ್ಲ; ಆದರೂ ಅವರ ಆಡಳಿತದ ಕುಂದುಕೊರತೆಗಳು ಅನೇಕ. ತಾವೇ ಉಚ್ಚಜನಾಂಗದವರೆಂಬ ಹಮ್ಮು, ಭಾರತೀಯರ ವಿಚಾರದಲ್ಲಿ ಅವರಲ್ಲನೇಕರು ಹೊಂದಿದ್ದ ತಿರಸ್ಕಾರಭಾವನೆ, ಆಡಳಿತನೀತಿಯಲ್ಲಿ ಇಂಗ್ಲೆಂಡಿನ ಹಿತಲಾಭಗಳಿಗೆ ಅವರು ಕೊಟ್ಟ ಸ್ಥಾನ- ಇವು ಅಧಿಕಾರಷಾಹಿ ಆಡಳಿತದಿಂದ ಬಂದುವು. ಇಂದಿಗೂ ಅಧಿಕಾರಷಾಹಿ ಪದಕ್ಕೆ, ಇಂಗ್ಲೆಂಡ್ ಅಮೆರಿಕ ಮುಂತಾದ ದೇಶಗಳಲ್ಲಿ ಅಗೌರವ ಸೂಚಕವಾದ ಒಳಾರ್ಥವಿದ್ದೇ ಇದೆ. ಜರ್ಮನಿಯಲ್ಲಿ ಮಾತ್ರ, ಬ್ಯೂರಾಕ್ರಸಿ ಎಂದರೆ ಪ್ರಾಮಾಣಿಕರಾಗಿ ಕರ್ತವ್ಯನಿಷ್ಠೆಯಿಂದ ಆಡಳಿತ ನಡೆಸುವ ಅಧಿಕಾರವರ್ಗ ಎಂಬ ಶ್ಲಾಘನೀಯ ಅರ್ಥವಿದೆ.
	
ತಾತ್ತ್ವಿಕವಾಗಿ ವಿವೇಚನೆ ಮಾಡಿದರೆ, ಪ್ರಜಾಪ್ರಭುತ್ವದಲ್ಲಿ ಅಧಿಕಾರಷಾಹಿಗೆ ಸ್ಥಾನವೇ ಇಲ್ಲ. ಅಲ್ಲಿ ಪ್ರಜೆಗಳೇ ಪ್ರಭುಗಳು; ಅವರ ಅಥವಾ ಅವರ ಪ್ರತಿನಿಧಿಗಳ, ತೀರ್ಮಾನಕ್ಕೆ ಎದುರು ಮಾತೇ ಇಲ್ಲ. ಆಡಳಿತ ನಡೆಸುವವರೆಲ್ಲ-ಮಂತ್ರಿಗಳು ಕೂಡ-ಆ ತೀರ್ಮಾನಗಳನ್ನು ಮನ್ನಿಸಿ ಅವಕ್ಕೆ ಅನುಸಾರವಾಗಿ ವರ್ತಿಸಬೇಕು. ಪ್ರಜೆಗಳ ಹಿತ, ಕ್ಷೇಮ, ಅಭ್ಯುದಯಗಳೇ ಅವರ ಗುರಿ. ಹೀಗೆ ಪ್ರಜಾಪ್ರಭುತ್ವದಲ್ಲಿ ಆಡಳಿತಾಧಿಕಾರಿಗಳು ಪ್ರಜಾಸೇವಕರಾಗುತ್ತಾರೆ; ಪ್ರಜೆಗಳಿಗೆ ಅಹಿತವಾದದ್ದೇನನ್ನೂ ಅವರು ಮಾಡಲಾರರು. ಆದರೆ ಇಂದಿನ ಪ್ರಜಾಪ್ರಭುತ್ವಗಳ ಸ್ಥಿತಿಗತಿಗಳನ್ನು ನೋಡಿದರೆ, ಈ ವಾದಸರಣಿ ಕೇವಲ ತತ್ತ್ವಾಧಾರದ್ದೇ ಹೊರತು ವಾಸ್ತವಿಕಪರಿಸ್ಥಿತಿಯನ್ನು ಕುರಿತದ್ದಲ್ಲ ಎಂಬುದು ವೇದ್ಯವಾಗುತ್ತದೆ. ಇತ್ತೀಚೆಗೆ ವಿe್ಞÁನ ವಿಸ್ಮಯಕರವಾದ ರೀತಿಯಲ್ಲಿ ಮುಂದುವರಿಯುತ್ತಿದೆ; ಕೈಗಾರಿಕೋದ್ಯಮಗಳು ಬೃಹದಾಕಾರವನ್ನು ತಾಳಿವೆ; ಅಪಾರಧನಗಳಿಸಿ ಪ್ರಜಾಭಿಪ್ರಾಯವನ್ನು ಇಷ್ಟಬಂದಂತೆ ರೂಪಿಸಬಲ್ಲ ಶ್ರೀಮಂತವರ್ಗ ಬೆಳೆದಿದೆ; ಸಂಕೀರ್ಣವಾಗಿ ಮುಂದುವರಿದಿರುವ ಪತ್ರಿಕಾ ಪ್ರಪಂಚ ಅದರ ಬೆಂಬಲಕ್ಕಿದೆ. ಸರ್ಕಾರದ, ಕೈಗಾರಿಕಾ ಸಂಸ್ಥೆಗಳ, ಆಡಳಿತದಲ್ಲಿ ನಾನಾ ಶಾಖೆಗಳುಂಟಾಗಿ ಅವು ನುರಿತ ಪ್ರವೀಣರ ಕೈಸೇರಿವೆ; ಸಾಮಾನ್ಯಜನತೆ ಇವರ ನಿದರ್ಶನದಲ್ಲಿ ಮುಂದುವರಿಯಬೇಕು. ಪರಿಣಾಮವಾಗಿ, ಪ್ರಜಾಹಿತವೊಂದನ್ನೇ ಗುರಿಯಾಗಿಟ್ಟುಕೊಂಡು ಆಡಳಿತನೀತಿಯನ್ನು ರೂಪಿಸಿದರೂ ಅದರ ನಿರ್ವಹಣ ಪ್ರತಿಷ್ಠಿತ ಅಥವಾ ಪ್ರಭಾವಿತವ್ಯಕ್ತಿಗಳ ಕೈಗೆ ಸಿಕ್ಕಿ ಉದ್ದೇಶಸಾಧನೆಯಾಗದಿರಬಹುದು. ಪ್ರಾಮಾಣಿಕ, ಉದ್ಯೋಗಶೀಲತೆ, ನಿಷ್ಪಕ್ಷಪಾತ, ಕಾರ್ಯಸಮರ್ಥತೆ, ಪ್ರಗತಿಪರತೆ, ಸೌಜನ್ಯ, ಪ್ರಜಾಸಾಮಾನ್ಯರ ಕ್ಷೇಮಚಿಂತನೆ- ಇವು ಆಡಳಿತವರ್ಗದ ಎಲ್ಲ ಮಟ್ಟದವರಲ್ಲೂ ಬೆಳೆದು, ಅಕ್ರಮ ಸಂಪಾದನೆ, ಲಂಚ ಮೊದಲಾದ ದುವ್ರ್ಯಾಪಾರಗಳು, ಮೈಗಳ್ಳತನ, ಸ್ವಪಕ್ಷಪಾತ, ದುಂದುಗಾರಿಕೆ ಮುಖ್ಯವಾಗಿ ಅಧಿಕಾರದರ್ಪ; ಪ್ರಜಾಹಿತದ ವಿಷಯದಲ್ಲಿ ಉಪೇಕ್ಷೆ- ಇವು ನಿವಾರಿಸಲ್ಪಟ್ಟು, ಪ್ರಜಾಪ್ರಭುತ್ವದ ಆದರ್ಶಗಳಿಗನುಗುಣವಾದ ಆಡಳಿತಕ್ರಮವನ್ನು ರೂಪಿಸುವುದಕ್ಕೋಸ್ಕರ, ಸಂಶೋಧನೆಗಳು ಪ್ರಯೋಗಗಳು ಇತ್ತೀಚೆಗೆ ಹೆಚ್ಚುಹೆಚ್ಚಾಗಿ ನಡೆದಿವೆ. ಅಸಮರ್ಥ ಪ್ರಜಾಪ್ರಭುತ್ವ ಅಧಿಕಾರಷಾಹಿ ಆಡಳಿತಕ್ಕೆ ಎಡೆಮಾಡಿಕೊಡುತ್ತದೆಂಬ ಪ್ಲೇಟೊ ವಾಣಿ ಸದಾ ಜನತೆಯ ನೆನಪಿನಲ್ಲಿರಬೇಕಾದುದು ಅತ್ಯಗತ್ಯ.						
(ಎ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ